ನೆನಪಿನ ದೋಣಿಯಲಿ....ಕವಳ ಗುಹೆ
ಅಂದು ಭಾನುವಾರ ಮಧ್ಯಾನ ನಾನು ನನ್ನ ಪತ್ನಿ ಮತ್ತೆ ಹುಡುಗರು ಊಟ ಮುಗಿಸಿ ಹರಟೆಯಲ್ಲಿ ಮಗ್ನವಾಗಿದ್ದೆವು.ಇಡೀ ವಾರ ಕೆಲಸ.ಎಲ್ಲರೂ ಜೊತೆಜೊತೆಯಲಿ ಮಧ್ಯಾನ ಊಟಮಾಡುವದು ಭಾನುವಾರ ಮಾತ್ರ.
"ರೀ, ನಾಳೆ ಶಿವರಾತ್ರಿ. ಸಾಯಂಕಾಲ ಮಾರ್ಕೆಟಿಗೆ ಹೋಗಿ
ಹೂವು, ಹಣ್ಣು, ಹಾಗು ಶಿವ ಪೂಜಾ ಸಾಮಗ್ರಿ ತರಬೇಕು.." ಎಂದು ಜ್ಞಾಪಿಸಿದರು.
ಮಹಾಶಿವರಾತ್ರಿ ಅಂದ ತಕ್ಷಣ ನೆನಪಿಗೆ ಬಂತು ಉತ್ತರ ಕನ್ನಡ ಜಿಲ್ಲೆಯ ಅಣಶಿ ರಕ್ಷಿತ ಅಭಯಾರಣ್ಯದಲ್ಲಿರುವ ಕವಳ ಗುಹೆ.ಶಿವರಾತ್ರಿಯ ದಿನದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆ.ಪ್ರತಿ ವರ್ಷ ಶಿವರಾತ್ರಿಯಂದು ಸಾವಿರಾರು ಜನರು ಕವಳ ಗುಹೆಗೆ ಆಗಮಿಸುತ್ತಾರೆ.
ಅಂಬಿಕಾನಗರ ದಲ್ಲಿ ಕೆಲಸ ಮಾಡುವಾಗ,ನಾನು ಸಹದ್ಯೋಗಿಗಳ ಜೊತೆ ಶಿವರಾತ್ರಿ ದಿನ ಕವಳ ಗುಹೆ ಗೆ ಹೋಗತ್ತಿದ್ದೆ.
ಕರ್ನಾಟಕ ವಿದ್ಯುತ ನಿಗಮ ರವರ ನಾಗಝರಿ ವಿದ್ಯುದಾಗಾರ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯೊಂದರಲ್ಲಿ ಸೇವೆಸಲ್ಲಿಸುತ್ತಿದ್ದೆ. ನಾಗಝರಿ ವಿದ್ಯುದಾಗಾರ ಇರುವದು, ಅಂಬಿಕಾನಗರ ಟೌನಶಿಪ ದಿಂದ
10 ಕಿ.ಮಿ ದೂರ ನೇರ ತಳಕ್ಕೆ ಇರುವ ಕಾಳಿನದಿ ದಡದ ಮೇಲೆ. ಈ ಪ್ರದೇಶದ ಹೆಸರು ಬಾಟಮ್ ಎಂದಿತ್ತು. ಬಾಟಮ್ ದಿಂದ ಸ್ವಲ್ಪ ದೂರ ನಡೆದು,ಕಾಳಿ ಹೊಳೆ ದಾಟಿ ಗುಡ್ಡಏರಿ , ನೂರಾರು ಮೆಟ್ಟಳು ಹತ್ತಿ ಕವಳ ಗುಹೆಗೆ ಹೋಗುತ್ತಿದ್ದೆವು.
ಕಷ್ಟಕರ ಅರಣ್ಯ ದಾರಿ.
ಪ್ರಕೃತಿದತ್ತವಾಗಿ ನಿರ್ಮಾಣವಾಗಿರುವ ಗುಹೆ.
ಗುಹೆ ಪ್ರವೇಶದ್ವಾರದಲ್ಲಿ ಒಂದು ದೇವಾಲಯವಿದೆ. ಇಲ್ಲಿ ತಲುಪಿದ ನಂತರ, ಶಿವಲಿಂಗ ದರ್ಶನಕ್ಕೆ ನಾವು ಗುಹೆ ಪ್ರವೇಶಿಸಬೇಕಾಗುತ್ತದೆ.
ತೀರಾ ಇಕ್ಕಟ್ಟಾದ ಗುಹೆ . ಒಮ್ಮೆ ಒಬ್ಬರು ಮಾತ್ರ ತೆವಳುತ್ತಾ ಪ್ರವೇಶಿಸ ಬೇಕಾಗುತ್ತದೆ. ಗುಹೆ ಒಳಗೆ ನೈಸರ್ಗಿಕವಾಗಿ ರೂಪುಗೊಂಡ ಬೃಹತ್ ಆಕಾರದ ಶಿವಲಿಂಗವಿದೆ. ಪ್ರಕೃತಿಯ ಪವಾಡವೇ ಸರಿ.ಸುಮಾರು 4 ಅಡಿ ಎತ್ತರ ಮತ್ತು 3 - 4 ಅಡಿ ವ್ಯಾಸ ಆಕಾರದ ಈ ಶಿವಲಿಂಗವೆ ಗುಹೆ ದೇವಾಲಯದ ವಿಶೇಷ ಆಕರ್ಷಣೆ.ಗುಹೆಯ ಮೇಲ್ಚಾವಣಿಯಲ್ಲಿರುವ ಆಕಳ ಕೆಚ್ಚಲು ಆಕಾರದ ಕಲ್ಲೊಂದರಿಂದ ನೀರ ಹನಿ ಒಂದೊಂದಾಗಿ ಈ
ಶಿವಲಿಂಗದ ಮೇಲೆ ಸದಾ ಬಿಳುತ್ತಿರುತ್ತದೆ. ಶಿವಲಿಂಗಕ್ಕೆ ಅಭಿಷೇಕ ಆಗುತ್ತಾಯಿದೆ ಎಂಬ ಭಾವನೆ ಬರುತ್ತದೆ.ಈ ಶಿವಲಿಂಗ " ಕವಳ" ಆಕಾರ ಹೊಂದಿದೆ ಅಂದರೆ ವಿಳ್ಯದೆಲೆಮೇಲೆ ಗುಂಡುಅಡಿಕೆ ಇಟ್ಟಾಂಗೆ ಗೋಚರಿಸುತ್ತದೆ. ಅದಗೋಸ್ಕರ ಈ ಗುಹೆಗೆ " ಕವಳ" ಎಂದು ಹೆಸರು ಬಂದಿರಬಹುದು.
ಈ ಗುಹೆಯಲ್ಲಿ ಪ್ರಾಚೀನ ಕಾಳದಲ್ಲಿ ಸಿದ್ಧ ಪಂಥಕ್ಕೆ ಸೇರಿದ ಕಪಿಲ ಸಿದ್ದ ಮುನಿ ಎಂಬಾತ ಅಗ್ನಿ ಹೋತ್ರ ತಪಸ್ಸುಗಳನ್ನ ಮಾಡಿಕೊಂಡಿದ್ದರಂತೆ. ಆ ಮುನಿಯ ಹೆಸರಿನಲ್ಲಿ " ಸಿದ್ದನ ಗುಹೆ" ಅಂತಲೂ ಗುರುತಿಸುತ್ತಾರೆ.
ಈ ಗುಹೆ ಮೈಲುದೂರಕ್ಕೆ ಸಾಗಿದೆ ಎಂದು ಹೇಳುತ್ತಾರೆ. ಮುಂದೆ ಸಾಗಿದಂತೆ ಗುಹೆ ಕಿರಿದಾಗಿದ್ದು, ಕಗ್ಗತ್ತಲಿನಿಂದ ಕೂಡಿದೆ. ಶಿವರಾತ್ರಿ ದಿನ ಗುಹೆಯೋಳಗೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ.ಗುಹೆ
ಒಳಗೆ ಮಾನವ ನಿರ್ಮಿತ ವಿಗ್ರಹ ಹಾಗೂ ಶಿಲ್ಪಕಲಾಕೃತಿ ಗಳು ಇವೆ .
ಜಾಗೃತ ಶೈವ ಪುಣ್ಯಕ್ಷೇತ್ರ ಎಂದು ಹೇಳಲಾಗುತ್ತಿರುವ ಅಭಯಾರಣ್ಯದಲ್ಲಿರುವ ಕವಳ ಗುಹೆ ಪ್ರಕೃತಿಯ ಪವಾಡವೇ ಸರಿ.
No comments:
Post a Comment